ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 17ನೇ ಘಟಿಕೋತ್ಸವ ಸಮಾರಂಭ
- Shakti Prasad
- May 8
- 2 min read
ಚಿತ್ರದುರ್ಗ ಮೇ 7 : ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಬಿಚ್ಚುಗತ್ತಿ ಬರಮಣ್ಣ ನಾಯಕ ಆಡಿಟೋರಿಯಂನಲ್ಲಿ ಬುಧವಾರ ಸಂಜೆ ನಡೆದ 17ನೇ ಘಟಿಕೋತ್ಸವ ಉದ್ಯಮಾಹ್-2025 ಸಮಾರಂಭದಲ್ಲಿ 97 ಸ್ನಾತಕ ಹಾಗೂ 30 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ವೈದ್ಯರಾಗುವವರು ಮುಖ್ಯವಾಗಿ ಸೇವಾಮನೋಭಾವ ರೂಢಿಸಿಕೊಳ್ಳಬೇಕು. ಸಮರ್ಪಣಾಭಾವ ಇರಬೇಕು. ತಮ್ಮನ್ನು ನಂಬಿ ಬರುವ ರೋಗಿಗಳ ಅನಾರೋಗ್ಯವು ತಮ್ಮ ಒಳ್ಳೆಯ ಮಾತುಗಳಿಂದಲೇ ಅರ್ಧ ಗುಣಮುಖರಾಗಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು. ನಮಗೆ ಹಣ ಮುಖ್ಯ ಆಗಬಾರದು. ಸೇವೆ ಮುಖ್ಯ ಆಗಬೇಕು. ಮದರ್ ತೆರೇಸಾರಂಥ ಸೇವಾ ಗುಣ ನಿಮ್ಮಲ್ಲಿರಬೇಕು. ನಿಮ್ಮ ಒಳ್ಳೆಯ ಗುಣಗಳನ್ನು ಇತರರು ಅನುಕರಿಸವಂತಿರಬೇಕು. ನಮ್ಮ ತಂದೆ ತಾಯಿಯರಿಗೆ ಗೌರವ ಕೀರ್ತಿ ತರುವಂತಹ ಕೆಲಸ ಮಾಡಬೇಕು. ಎಷ್ಟೋ ಪೋಷಕರು ತಮ್ಮ ಮಕ್ಕಳು ವೈದ್ಯರಾಗಬೇಕೆಂದು ದೊಡ್ಡ ಕನಸು ಕಂಡಿರುತ್ತಾರೆ. ಇಂದು ಆ ಕನಸು ನನಸಾಗಬಹುದು. ಆದರೆ ನಿಮ್ಮ ಉತ್ತಮ ಜನಸೇವೆಯಿಂದಾಗಿ ಸಮಾಜ ನಿಮ್ಮನ್ನು ಗೌರವಿಸುವಂತಾಗಬೇಕು ಅಂದಾಗ ಮಾತ್ರ ತಮ್ಮ ತಂದೆ ತಾಯಿಗಳಿಗೆ ನಿಜವಾದ ಕನಸು ಈಡೇರಿದಂತಾಗುತ್ತದೆ ಎಂದು ಹೇಳಿದರು.
ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್ ಮಾತನಾಡಿ, ನಮ್ಮ ವಿದ್ಯಾಲಯದ ಶ್ರೇಯವನ್ನು ಯಾಂಕ್ ವಿಜೇತರು ಇನ್ನಷ್ಟು ಉತ್ತುಂಗಕ್ಕೆ ಏರಿಸಿದ್ದಾರೆ. ಇವರ ಮುಂದಿನ ಸೇವೆಯು ಹಳ್ಳಿಗಾಡಿನ ಜನಸಾಮಾನ್ಯರಿಗೆ ತಲುಪುವಂತಾಗಲಿ, ಆಸ್ಪತ್ರೆಯ ಪ್ರತಿಯೊಂದು ಸಮಸ್ಯೆಗೂ ನಮ್ಮ ವಿದ್ಯಾಪೀಠ ಸಹಕರಿಸುತ್ತದೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್ ಎಂ.ಎಸ್. ಮಾತನಾಡುತ್ತಾ, ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ ರೋಗಿಗಳ ಸೇವೆಗೆ ಪೂರಕವಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇಂದಿನ ಯಾಂಕ್ ವಿಜೇತರಲ್ಲಿ ಮಹಿಳೆಯರದೇ ಸಿಂಹಪಾಲು. ಮಹಿಳಾ ದಿನಾಚರಣೆಯನ್ನು ಇಂದು ಆಚರಿಸುತ್ತಿದ್ದು ಪೂರಕವಾಗಿದೆ ಎಂದರು.
ಡಾ| ರೇವತಿ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡುತ್ತ, ರ‍್ಯಾಂಕ್ ವಿಜೇತರ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಹಿಳೆಯರ ಸ್ವಾಭಿಮಾನ ಹಕ್ಕುಗಳ ಬಗ್ಗೆ ಕೂಲಂಕುಶ ಮಾಹಿತಿ ನೀಡಿದರು.
ರ‍್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುವ ಸ್ನಾತಕೋತ್ತರ ವಿಭಾಗದ ಡಾ| ಮೋನಿಕಾ ಎಂ. 6ನೇ ರಾಂಕ್ ಓಬಿಜಿ ವಿಭಾಗ, ಡಾ| ಮೇಘನಾ ಎಸ್.ಎ. 8ನೇ ರಾಂಕ್ ರೆಸ್ಪಿರೇಟರಿ ವಿಭಾಗ, ಡಾ| ಮಧು ಜಿ.ಆರ್. 9ನೇ ರ‍್ಯಾಂಕ್ ಓಬಿಜಿ, ಡಾ|| ಐಶ್ವರ್ಯ ಪಿ ಜೋಗ್ 10ನೇ ರ‍್ಯಾಂಕ್ ಸೈಕಿಯಾಟ್ರಿ ವಿಭಾಗ, ಡಾ॥ ಅಪೂರ್ವ ಆರ್. ಶಹಪುರ. 9ನೇ ರ‍್ಯಾಂಕ್ ಡಿವಿಎಲ್ ಮತ್ತು ಸ್ನಾತಕ ವಿಭಾಗದ ಡಾ| ಹೆಗಡೆ ಅನುಷಾ ರಘುನಾಥ್, 3ನೇ ರ‍್ಯಾಂಕ್ ಎನ್‌ಟಿ, ಡಾ| ಸಮರ್ಥ ಕುಲಕರಣಿ 7ನೇ ರ‍್ಯಾಂಕ್ ಫಿಜಿಯೋಲಜಿ, ಡಾ॥ ಚೈತ್ರ ಎಸ್. 8ನೇ ರ‍್ಯಾಂಕ್ ಈಎನ್‌ಟಿ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಎಸ್. ನವೀನ್ ಮತ್ತು ವಿಜಯಪುರ ಬಿಎಲ್‌ಡಿಇ ಸಂಸ್ಥೆಯ ಕುಲಾಧಿಪತಿ ಡಾ. ವೆ.ಎಂ. ಜಯರಾಜ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಬಸವೇಶ್ವರ ವೈದ್ಯಕೀಯ ಕಾಲೇಜಿನ ಡೀನ್ ಡಾ| ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ| ಎಂ.ಎನ್. ರಾಜೇಶ್, ಡಾ। ನಾಗೇಂದ್ರಗೌಡ, ಡಾ| ಗಿರೀಶ್ ಪಾಟೀಲ್, ಡಾ|| ರಾಮು ಆರ್. ಉಪಸ್ಥಿತರಿದ್ದರು.
ಡಾ|| ಕು. ಅಭಿಜ್ಞ ಪ್ರಾರ್ಥಿಸಿದರು. ಡಾ|| ಪ್ರಶಾಂತ್ ಜಿ. ಸ್ವಾಗತಿಸಿದರು. ಡಾ| ಅಮತ ಎ.ಎಂ. ಡಾ|| ಅಶ್ವಿನಿ ಜಿ.ಎನ್. ನಿರೂಪಿಸಿದರು. ಡಾ| ರಾಜೇಶ್ ಎಂ.ಎನ್. ವಂದಿಸಿದರು








Comments